60 ಸೆಕೆಂಡ್‌ನಲ್ಲಿ ಎಲ್ಲವೂ ಫಿನಿಶ್!..ಟ್ರಾಫಿಕ್ ಕ್ಯಾಮೆರಾದಿಂದಲೇ ಖಮೇನಿ ಅಂತ್ಯದ ಸ್ಕೆಚ್ ಹಾಕಿದ ಮೊಸಾದ್; ಈ ರಹಸ್ಯ ಕೇಳಿದ್ರೆ ನೀವು ಶಾಕ್ ಆಗ್ತೀರಾ! | Ali Khamenei Death

Ali Khamenei Death | ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ
Ali Khamenei Death | ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ
Published on
Ali Khamenei: ಜಗತ್ತೇ ಬೆಚ್ಚಿಬೀಳುವಂತಹ ಒಂದು ಹತ್ಯೆ... ಅದರ ಹಿಂದೆ ವರ್ಷಗಳ ಕಾಲ ನಡೆದ ತಾಂತ್ರಿಕ ಬೇಹುಗಾರಿಕೆ, ಕೇವಲ 60 ಸೆಕೆಂಡ್‌ಗಳಲ್ಲಿ ಬದಲಾದ ಇತಿಹಾಸ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ(Ali Khamenei Death) ಹಿಂದೆ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್ ಹೆಣೆದಿದ್ದ ಬೃಹತ್ ತಂತ್ರಗಾರಿಕೆಯನ್ನು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.

ಇಸ್ರೇಲ್‌ನ ಸೈಬರ್ ಬೇಟೆ

ಫೈನಾನ್ಷಿಯಲ್ ಟೈಮ್ಸ್ ವರದಿಯ ಪ್ರಕಾರ, ಇಸ್ರೇಲ್ ಈ ಕಾರ್ಯಾಚರಣೆಗಾಗಿ ಕೇವಲ ಬಾಂಬ್ ಅಥವಾ ಕ್ಷಿಪಣಿಗಳನ್ನು ನಂಬಿರಲಿಲ್ಲ. ಬದಲಾಗಿ, ಇರಾನ್‌ನ ರಾಜಧಾನಿ ಟೆಹ್ರಾನ್‌ನ ಇಂಚಿಂಚು ಮಾಹಿತಿಯನ್ನು ಕಲೆಹಾಕಲು ಸೈಬರ್ ದಾಳಿಯನ್ನು ಅಸ್ತ್ರವಾಗಿ ಬಳಸಿತ್ತು ಎನ್ನಲಾಗಿದೆ.
ಟೆಹ್ರಾನ್‌ನ ಬಹುತೇಕ ಎಲ್ಲಾ ಟ್ರಾಫಿಕ್ ಕ್ಯಾಮೆರಾಗಳನ್ನು ಇಸ್ರೇಲ್ ಹ್ಯಾಕ್ ಮಾಡಿತ್ತು. ಇದರಿಂದ ಇರಾನ್ ನಾಯಕರ ಪ್ರತಿ ಕ್ಷಣದ ಚಲನವಲನಗಳು ಟೆಲ್ ಅವಿವ್‌ನ ಸರ್ವರ್‌ಗಳಲ್ಲಿ ಲೈವ್ ಆಗಿ ಕಾಣುತ್ತಿದ್ದವು. ಟೆಹ್ರಾನ್‌ನ ಪಾಶ್ಚರ್ ಸ್ಟ್ರೀಟ್ ಬಳಿಯ ಕಾಂಪೌಂಡ್‌ನೊಳಗೆ ಖಮೇನಿ ಅಂಗರಕ್ಷಕರು ತಮ್ಮ ವಾಹನಗಳನ್ನು ಎಲ್ಲಿ ನಿಲ್ಲಿಸುತ್ತಾರೆ ಎಂಬ ಸಣ್ಣ ಮಾಹಿತಿಯನ್ನು ಇಸ್ರೇಲ್ ಈ ಕ್ಯಾಮೆರಾಗಳ ಮೂಲಕ ಪತ್ತೆ ಹಚ್ಚಿತ್ತು. ಈ ಸಣ್ಣ ಸುಳಿವೇ ದೈನಂದಿನ ದಿನಚರಿಯನ್ನು ತಿಳಿದುಕೊಳ್ಲಲು ನೆರವಾಯಿತು.

ಹಗಲಲ್ಲೇ ನಡೀತು ಆಪರೇಷನ್

ದಾಳಿಯ ಯೋಜನೆ ರಾತ್ರಿ ಹೊತ್ತಿಗೆ ತಯಾರಾಗಿತ್ತು. ಆದರೆ, ಶನಿವಾರ ಬೆಳಿಗ್ಗೆ ಟೆಹ್ರಾನ್‌ನ ಹೈ-ಸೆಕ್ಯೂರಿಟಿ ವಲಯದಲ್ಲಿ ಇರಾನಿನ ಉನ್ನತ ನಾಯಕರು ಸಭೆ ಸೇರುವ ಮಾಹಿತಿ ಸಿಕ್ಕ ತಕ್ಷಣ ಇಸ್ರೇಲ್ ತನ್ನ ಪ್ಲಾನ್ ಬದಲಿಸಿತು. ಇಸ್ರೇಲ್‌ನ ಫೈಟರ್ ಜೆಟ್‌ಗಳು ಹಾರಿಸಿದ ನಿಖರ ಯುದ್ಧಸಾಮಗ್ರಿಗಳು ಕೇವಲ 60 ಸೆಕೆಂಡ್‌ಗಳಲ್ಲಿ ಮೂರು ಪ್ರಮುಖ ಗುರಿಗಳನ್ನು ಧ್ವಂಸಗೊಳಿಸಿದವು.

ಮೊಸಾದ್‌ನ ಟ್ರೋಜನ್ ಹಾರ್ಸ್ ತಂತ್ರ

ಇಸ್ರೇಲ್‌ನ ಬುದ್ಧಿವಂತಿಕೆಗೆ ಸಾಕ್ಷಿಯೆಂದರೆ ಹೆಜ್ಬೊಲ್ಲಾ ಸಂಘಟನೆಯನ್ನು ಗುರಿಯಾಗಿಸಿಕೊಂಡು ನಡೆಸಿದ ಪೇಜರ್ ದಾಳಿ. ಮೊಸಾದ್ ಏಜೆಂಟ್‌ಗಳು ಗೇಬ್ರಿಯಲ್ ಎಂಬ ಹೆಸರಿನಲ್ಲಿ ಹೆಜ್ಬೊಲ್ಲಾ ನಾಯಕರನ್ನು ನಂಬಿಸಿ, ಸ್ಫೋಟಕ ತುಂಬಿದ ಪೇಜರ್‌ಗಳನ್ನು ಬಳಸುವಂತೆ ಮಾಡಿದರು ಎನ್ನಲಾಗಿದೆ.
ಪೇಜರ್ ತೆಗೆದು ನೋಡುವಷ್ಟು ತೀವ್ರವಾದ ರಿಂಗ್‌ಟೋನ್ ಮತ್ತು ಜಲನಿರೋಧಕ ವೈಶಿಷ್ಟ್ಯಗಳಿರುವ ಸುಳ್ಳು ಜಾಹೀರಾತುಗಳನ್ನು ಯೂಟ್ಯೂಬ್‌ನಲ್ಲಿ ಹರಡಿ, ಶತ್ರುಗಳು ಆ ಸಾಧನಗಳನ್ನೇ ಬಳಸುವಂತೆ ಮಾಡಲಾಯಿತು. ಇದು ಇತಿಹಾಸದ ಅತಿದೊಡ್ಡ ತಾಂತ್ರಿಕ ವಂಚನೆಯಾಗಿ ದಾಖಲಾಗಿರುವುದಾಗಿ ವರದಿಯಾಗಿದೆ.

ಅಮೆರಿಕಾ ಎಂಟ್ರಿ...

ಈ ದಾಳಿಯು ಕೇವಲ ಇರಾನ್-ಇಸ್ರೇಲ್​ಗೆ ಸೀಮಿತವಾಗಿಲ್ಲ, ಅಮೆರಿಕದ ಗುಪ್ತಚರ ಸಂಸ್ಥೆಗಳು ಖಮೇನಿಯವರ ವಾಸಸ್ಥಾನ, ಭೇಟಿ ಮಾಡುವ ವ್ಯಕ್ತಿಗಳು ಮತ್ತು ಸಂವಹನ ವ್ಯವಸ್ಥೆಯನ್ನು ಪತ್ತೆಹಚ್ಚಲು ದಶಕಗಳಿಂದ ಇಸ್ರೇಲ್‌ಗೆ ನೆರವಾಗಿದ್ದವು ಎನ್ನುವ ಅಂಶ ಬೆಳಕಿಗೆ ಬಂದಿದೆ. ವಾರಾಂತ್ಯದಲ್ಲಿ ಕುವೈತ್ ಮೇಲೆ ಇರಾನ್ ನಡೆಸಿದ ಪ್ರತೀಕಾರದ ದಾಳಿಯಲ್ಲಿ ಆರು ಅಮೆರಿಕನ್ ಸೇವಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ನೇರ ಸಂಘರ್ಷವು ಇಡೀ ಕೊಲ್ಲಿ ಪ್ರದೇಶವನ್ನು ಮಹಾಯುದ್ಧದ ಅಂಚಿಗೆ ತಂದು ನಿಲ್ಲಿಸಿದ್ದು, ಕೇವಲ ಎರಡು ದೇಶಗಳ ನಡುವಿನ ಸೇಡಿನಾಟವಾಗಿ ಉಳಿಯದ ಈ ಯುದ್ಧವು ಈಗ ನಾಗರಿಕರ ಸಾವು-ನೋವು, ಜಾಗತಿಕ ವಾಯುಯಾನದ ಅಸ್ತವ್ಯಸ್ತ ಮತ್ತು ಆರ್ಥಿಕ ಸುನಾಮಿಗೆ ದಾರಿ ಮಾಡಿಕೊಟ್ಟಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net